ಕೇಶವವರ್ಣಿ	
	
14ನೆಯ, ಶತಮಾನದಲ್ಲಿದ್ದ ಜೈನ ಸಿದ್ಧಾಂತ ಪಂಡಿತ. ಪ್ರಾಕೃತ, ಸಂಸ್ಕøತ ಆಗಮಗ್ರಂಥಗಳ ಸಾರವನ್ನು ವೃತ್ತಿರೂಪವಾಗಿ ಕನ್ನಡಕ್ಕೆ ತಂದಿದ್ದಾನೆ. ಈತ ಅಭಯಸೂರಿ ಸಿದ್ಧಾಂತಚಕ್ರವರ್ತಿಯ ಪಟ್ಟದ ಶಿಷ್ಯ. 

ಸಾರತ್ರಯವೇದಿಯೆಂದು ತನ್ನನ್ನು ಕರೆದುಕೊಂಡಿದ್ದಾನೆ. ವೃತ್ತಿಯೊಂದರ ಕೊನೆಯಲ್ಲಿ ತನ್ನ ಹೆಸರನ್ನು ಕೇಶಣ್ಣ ಎಂದು ಹೇಳಿಕೊಂಡಿದ್ದಾನೆ. ಇವನ ಅನಂತರ ಬಂದ ಒಂದನೆಯ ಮಂಗರಾಜ (1360) ಮತ್ತು ದೇವಚಂದ್ರ (1770)-ಇವರಿಬ್ಬರೂ ಈತನನ್ನು ಸಾರತ್ರಯವೇದಿಯೆಂದು ಕೊಂಡಾಡಿರುವರು. ಎರಡನೆಯ ಅಮಿತಗತಿಯ (993) ಶ್ರಾವಕಾಚಾರಕ್ಕೆ ಈತ ಕನ್ನಡ ವೃತ್ತಿಯನ್ನು ರಚಿಸಿದ್ದಾನೆ. ಜಿತೇಂದ್ರಮಾಲೆಗೂ ಈತ ಕನ್ನಡ ಟೀಕೆಯನ್ನು ರಚಿಸಿರುವಂತಿದೆ.

ಹತ್ತನೆಯ ಶತಮಾನದಲ್ಲಿ ಚಾಮುಂಡರಾಯನ ಗುರುವಾದ ಸಿದ್ಧಾಂತ ಚಕ್ರವರ್ತಿ ನೇಮಿಚಂದ್ರಾಚಾರ್ಯ ಪ್ರಾಕೃತದಲ್ಲಿ ಬರೆದಿರುವ ಗೋಮಟಸಾರ, ತ್ರಿಲೋಕಸಾರ ಮತ್ತು ಲಬ್ದಿಸಾರಗಳನ್ನು ಸಾರತ್ರಯವೆಂದು ಕರೆಯುತ್ತಾರೆ. ಈ ಮೂರು ಗ್ರಂಥಗಳ ಮೇಲೂ ಕೇಶವವರ್ಣಿ ಕರ್ಣಾಟಕ ವೃತ್ತಿಯನ್ನು ಬರೆದಿರಬೇಕು. ಆದರೆ ಇಂದು ನಮಗೆ ದೊರೆತಿರುವುದು ಗೋಮಟಸಾರದ ಕರ್ಣಾಟಕ ವೃತ್ತಿ ಒಂದೇ. ಗೋಮಟಸಾರ ಕೃತಿ ಜೀವಕಾಂಡ ಮತ್ತು ಕರ್ಮಕಾಂಡವೆಂದು ಎರಡು ಭಾಗವಾಗಿದೆ; ಕೇಶವವರ್ಣಿ ಕರ್ಮ ಮತ್ತು ಜೀವ ಇವುಗಳ ವಿಚಿತ್ರ ವಿನ್ಯಾಸವನ್ನು ಈ ವೃತ್ತಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾನೆ. ಈ ವೃತ್ತಿಯ ಕೊನೆಯಲ್ಲಿ `ಇಂತು ಭಗವದರ್ಹತ್ಪರಮೇಶ್ವರ ಚಾರುಚರಣಾರವಿಂದ ದ್ವಂದ್ವವಂದನಾನಂದಿತ ಪುಣ್ಯ ಪುಂಜಾಯಮಾನ ಶ್ರೀಮದ್ರಾಜರಾಯಗುರು ಮಂಡಲಾಚಾರ್ಯ ಮಹಾವಾದ ವಾದೀಶ್ವರ ರಾಯವಾದಿಪಿತಾಮಹ ಸಕಲ ವಿದ್ವಜ್ಜನ ಚಕ್ರವರ್ತಿ ಶ್ರೀಮದಭಯ ಸೂರಿ ಸಿದ್ಧಾಂತಚಕ್ರವರ್ತಿ ಶ್ರೀಪಾದಪಂಕಜ ರಜೋರಂಜಿತ ಲಲಾಟಪಟ್ಟಂ ಶ್ರೀಕೇಶವ ವಿರಚಿತ ಗೋಮಟಸಾರ ಕರ್ಣಾಟಕ ವೃತ್ತಿ ಜೀವತತ್ವ ಪ್ರದೀಪಿಕೆಯೊಳ್ ಎಂಬ ಗದ್ಯಭಾಗವಿದೆ.

ಜೈನಶ್ರಾವಕರ ಆಚರಣೆಯನ್ನು ವಿವರಿಸುವ ಶ್ರಾವಕಾಚಾರಕ್ಕೆ ಕೇಶವವರ್ಣಿ ರಚಿಸಿರುವ ಕರ್ಣಾಟಕ ವೃತ್ತಿಯಲ್ಲಿ 15 ಪರಿಚ್ಛೇದಗಳಿವೆ. ವೃತ್ತಿಯ ಕೊನೆಯಲ್ಲಿ `ಇಂತು ಪರಮಜಿನಸಮಯಸಿದ್ಧಾಂತಪೀಯೂಷಾರ್ಣವ ವರ್ಧಿಷ್ಟು ಕುಮುದ ಬಾಂಧವ ಶ್ರೀಮದಭಯಸೂರಿ ಸಿದ್ಧಾಂತಚಕ್ರವರ್ತಿ ಶ್ರೀಪಾದಪದ್ಮಾರಾಧಕನಪ್ಪ ಸಾರತ್ರಯವೇದಿ ಕೇಶಣ್ಣ ವಿರಚಿತಾಮಿತಗತಿ ಶ್ರಾವಕಾಚಾರ ವೃತ್ತಿಯೋಳ್ ಎಂಬ ಗದ್ಯವಿದೆ.                                				
 (ಬಿ.ಚಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ